ಬಗೆ ಬಗೆ ತಂಬುಳಿ ಮನೆಯಲ್ಲೇ ಮಾಡಿ..!

Video Description

ಊಟದ ರುಚಿ ಹೆಚ್ಚಿಸುವ ತಂಪು ತಂಪು ತಂಬುಳಿ ಬಗೆ ಬಗೆ ತಂಬುಳಿ ಮನೆಯಲ್ಲೇ ಮಾಡಿ..! ತಂಬುಳಿಯ ಊಟ ಭೋಜನ ಪ್ರಿಯರಿಗೆ ತುಂಬಾ ಅಚ್ಚುಮೆಚ್ಚು. ಸಾಮಾನ್ಯವಾಗಿ ಬಿಸಿ ಅನ್ನದ ಜೊತೆ ಇದು ಉತ್ತಮ ಕಾಂಬಿನೇಶನ್ ಎಂದೆನಿಸಿದೆ. ಇದು ಸಾಮಾನ್ಯವಾಗಿ ದ್ರವ ರೂಪದಲ್ಲಿ ಇರುತ್ತದೆ. ಮಜ್ಜಿಗೆಯನ್ನು ಇದರಲ್ಲಿ ಉಪಯೋಗಿಸಲಾಗುತ್ತದೆ. ಯಾವ ಮೂಲ ವಸ್ತುವನ್ನು ಉಪಯೋಗಿಸುತ್ತೇವೆಯೊ, ಅದರ ತಂಬುಳಿಯಾಗುತ್ತದೆ. ಆ ಪದಾರ್ಥದ ಜತೆಗೆ, ತೆಂಗಿನತುರಿಯನ್ನು ಸೇರಿಸಿ, ರುಬ್ಬಿ, ಮಜ್ಜಿಗೆಯನ್ನು ಮತ್ತ ಉಪ್ಪನ್ನು ಸೇರಿಸಿ ಒಗ್ಗರಣೆ ಕೊಡುವುದು. ಉದರ ಸಂಬಂಧಿ ಖಾಯಿಲೆಗಳಿಗೆ, ಬಾಯಿಹುಣ್ಣು, ಶೀತ, ಕೆಮ್ಮು ಇತ್ಯಾದಿ ಖಾಯಿಲೆಗಳಿಗೂ ಕೂಡಾ ದಿವ್ಯೌಷಧ ಆಗಬಲ್ಲಂತಹ ಅದೆಷ್ಟೊ ಗಿಡಮೂಲಿಕೆಗಳು, ಚಿಗುರುಗಳು ನಮ್ಮ ಮನೆಯಂಗಳದಲ್ಲೆ ಕಾಣಸಿಗುತ್ತವೆ. ತಂಬುಳಿ ಮಾಡಲು ಎಲೆಗಳಾದ ಒಂದೆಲಗ, ಎಲೆಮುರಿ, ಬಿಲ್ವಪತ್ರೆ ಹಾಗೂ ವೀಳ್ಯದೆಲೆ, ಚಿಗುರುಗಳಾದ ಮಾದಿರ, ನೆಲನೆಲ್ಲಿ, ಅತ್ತಿ ಮತ್ತು ನೆಕ್ಕರೆ, ಗೆಡ್ಡೆಗಳಾದ ಶುಂಠಿ, ನೀರುಳ್ಳಿ, ಬೆಳ್ಳುಳ್ಳಿ, ನೆಲ್ಲಿಕಾಯಿ, ಸಮೂಲವಾಗಿ ಗರ್ಗ, ಸಾಂಬಾರ ಬಳ್ಳಿ, ಕಾಳುಗಳಾದ ಮೆಂತೆ, ಜೀರಿಗೆ ಹಾಗೂ ಓಮ, ಹೂವುಗಳಾದ ತುಂಬೆ, ಬಿಸಿ ದಾಸವಾಳ ಮತ್ತು ಅಶೋಕ, ದಾಳಿಂಬ ಹಾಗೂ ಕಿತ್ತಳೆ ಸಿಪ್ಪೆಗಳನ್ನು ಬಳಸುತ್ತಾರೆ. ಹೆಚ್ಚಿನೆಲ್ಲಾ ತಂಬುಳಿಗಳನ್ನು ತಯಾರಿಸುವ ವಿಧಾನ ಸಾಮಾನ್ಯವಾಗಿ ಒಂದೇ ರೀತಿಯದ್ದಾಗಿರುತ್ತದೆ. ಆದರೆ ಅವುಗಳು ಆರೋಗ್ಯದ ಮೇಲೆ ಬೀರುವ ಪರಿಣಾಮ ಹಾಗೂ ಔಷಧೀಯ ಗುಣಗಳಲ್ಲಿ ವ್ಯತ್ಯಾಸವಿದೆ. ಮೂಲ ವಸ್ತುಗಳ ಆಧಾರದ ಮೇಲೆ ತಂಬುಳಿ ಮಾಡುವ ವಿಧಾನವನ್ನು ಎರಡು ರೀತಿಯಾಗಿ ವಿಂಗಡಿಸಬಹುದು. ಒಂದೆಲಗ ಹಾಗೂ ಮಾದಿರವನ್ನು ಹೊರತುಪಡಿಸಿ ಎಲ್ಲಾ ಎಲೆಗಳು, ಚಿಗುರುಗಳು, ಸಮೂಲ, ಕಾಳುಗಳು, ಹೂವುಗಳು ಹಾಗೂ ಸಿಪ್ಪೆ ಇವುಗಳ ತಂಬುಳಿ ತಯಾರಿಸುವ ವಿಧಾನ ಒಂದೇ ರೀತಿ. ಮೂಲವಸ್ತುವಿನೊಂದಿಗೆ ಒಂದು ಚಿಟಿಕೆ ಜೀರಿಗೆ ಹಾಗೂ ಒಣಮೆಣಸನ್ನು ಹಾಕಿ ತುಪ್ಪದಲ್ಲಿ ಹದವಾಗಿ ಹುರಿಯಬೇಕು. ಬಳಿಕ ಇವೆಲ್ಲವನ್ನೂ ಒಂದು ಮುಷ್ಟಿ ತೆಂಗಿನಕಾಯಿ ತುರಿಯೊಂದಿಗೆ ರುಬ್ಬಬೇಕು. ಈ ಮಿಶ್ರಣದೊಂದಿಗೆ ಒಂದು ಲೋಟ ಮಜ್ಜಿಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಕೊನೆಯದಾಗಿ ಒಗ್ಗರಣೆ ಕೊಟ್ಟರೆ ರುಚಿಕರವಾದ ತಂಬುಳಿ ಸಿದ್ಧ. ಉಳಿದಂತೆ ಎಲ್ಲಾ ಗೆಡ್ಡೆಗಳು, ಕಾಯಿಗಳು ಹಾಗೂ ಒಂದೆಲಗ ಮತ್ತು ಮಾದಿರದ ತಂಬುಳಿ ಮಾಡುವ ವಿಧಾನದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಮೂಲವಸ್ತುವಿನೊಂದಿಗೆ ಹಸಿಮೆಣಸು ಹಾಗೂ ಒಂದು ಮುಷ್ಟಿ ತೆಂಗಿನಕಾಯಿ ತುರಿ ಹಾಕಿ ರುಬ್ಬಬೇಕು. ಈ ಮಿಶ್ರಣಕ್ಕೆ ಒಂದು ಲೋಟ ಮಜ್ಜಿಗೆ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಕೊನೆಗೆ ಒಗ್ಗರಣೆ ಹಾಕಿದರೆ ತಂಬುಳಿ ತಯಾರಾದಂತೆಯೇ. ಮೆಂತೆ, ಬಿಳಿ ದಾಸವಾಳ, ಅಶೋಕ ಹೂವಿನ ತಂಬುಳಿ ಸೇವನೆಯಿಂದ ದೇಹ ತಂಪಾಗಿರುತ್ತದೆ. ಎಲೆಮುರಿ, ನೆಲ್ಲಿ ತಂಬುಳಿ ಸೇವನೆಯಿಂದ ದೇಹದಲ್ಲಿ ಕಬ್ಬಿಣ ಸತ್ವ ವೃದ್ಧಿಯಾಗುತ್ತದೆ. ನೆಲನೆಲ್ಲಿ ತಂಬುಳಿ ಹಳದಿ ರೋಗ ನಿವಾರಣೆಯಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಗರ್ಗದ ತಂಬುಳಿ ದೇಹದ ರಕ್ತವನ್ನು ಶುದ್ಧೀಕರಿಸುತ್ತದೆ. ಮನೆಯಂಗಳದಲ್ಲಿಯೇ ಸುಲಭವಾಗಿ ದೊರಕುವ ಗಿಡಮೂಲಿಕೆಗಳ ತಂಬುಳಿ ಮಾಡಿ ಸೇವಿಸುವುದರ ಮೂಲಕ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು. ರೋಗಗಳು ಬಾಧಿಸದಂತೆ ತಡೆಗಟ್ಟಬಹುದು. ತಂಬುಳಿಗಳಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇಲ್ಲದ ಕಾರಣ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.