ರೇಶ್ಮೆ ಸೀರೆ ಜೋಪಾನ ಮಾಡಿ..!

Video Description

ರೇಶ್ಮೆ ಸೀರೆ ಜೋಪಾನ ಮಾಡುವುದು ಹೇಗೆ? ರೇಶ್ಮೆ ಸೀರೆ ಜೋಪಾನ ಮಾಡಿ..! ನಮ್ಮ ದೇಶದಲ್ಲಿ ವೇದ ಕಾಲದಲ್ಲೇ ರೇಶ್ಮೆಯ ಉಪಯೋಗ ಇತ್ತೆಂಬುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಮಹಾವಿಷ್ಣುವನ್ನು ಕುರಿತು ಹೇಳುವಾಗ ಪೀತಾಂಬರ(ಹಳದಿ ಬಣ್ಣದ ರೇಶ್ಮೆ ಬಟ್ಟೆ)ಧಾರಿ ಎನ್ನುವ ಶಬ್ಧದ ಬಳಕೆಯಾಗಿರುವುದನ್ನು ನಾವೆಲ್ಲರೂ ಗಮನಿಸಿಯೇ ಇದ್ದೇವೆ. ಮುಂದೆ ರಾಮಾಯಣ, ಮಹಾಭಾರತಗಳಲ್ಲೂ ರಾಜ- ರಾಣಿಯರ ಬಾಹ್ಯ ರೂಪ, ವಿವಾಹ ಸಂಧರ್ಭಗಳು, ಅರಮನೆಯ ವೈಭವದ ಚಿತ್ರಣ....ಇತ್ಯಾದಿಗಳ ವರ್ಣನೆಯಲ್ಲಿ ರೇಶ್ಮೆ ಹಾಸುಹೊಕ್ಕಾಗಿಯೇ ಇರುತ್ತಿತ್ತು. ಅನ್ಯರ ಆಕ್ರಮಣವಾಗುವವರೆಗೂ ಭರತವರ್ಷದ (ಅಫ್ಘಾನಿಸ್ತಾನ, ನೇಪಾಳ, ಭೂತಾನ್, ಪಾಕಿಸ್ತಾನಗಳು ಸೇರಿದ ಭಾರತದ ಭೂಪಟ) ರೇಶ್ಮೆ ತಾಜಾವಾಗಿದ್ದಿರಲೇಬೇಕು. ಮುಂದೆ ಅನ್ಯರ ಆಕ್ರಮಣ ನಮ್ಮ ದೇಶವನ್ನು ಎಲ್ಲಾ ವಿಧಗಳಲ್ಲೂ ಛಿದ್ರಗೊಳಿಸಿತು. ಭಾರತದ ಒರಿಜಿನಾಲಿಟಿ ಎನ್ನುವುದು ಏನಿತ್ತೋ ಅದೆಲ್ಲವೂ ಕಲಬೆರಕೆಯಾಗಿಹೋಯ್ತು. ಅವುಗಳಲ್ಲಿ ರೇಶ್ಮೆಯೂ ಒಂದು. ಚೀನಾದ ರೇಶ್ಮೆಯ ಥಳುಕಿನೆದುರು ನಮ್ಮ ತಾಜಾ ರೇಶ್ಮೆ ಮಂಕಾಗಿ ಹೋಗಿತ್ತು. ಮಾತ್ರವಲ್ಲ ತಾಜಾ ರೇಶ್ಮೆಗಿಂತ ಕಡಿಮೆ ಕೀಮತ್ತಿನಲ್ಲಿ ಹೆಚ್ಚು ಜಗಮಗಿಸುವ ಚೈನಾ ಸಿಲ್ಕ್ ಒಂದು ಸಂದರ್ಭದಲ್ಲಿ ನಮ್ಮ ರೇಶ್ಮೆ ಉದ್ದಿಮೆಯನ್ನೇ ಆಪೋಶನ ತೆಗೆದುಕೊಳ್ಳುತ್ತದೆಯೆನೋ ಎಂಬಷ್ಟು ಜನಪ್ರಿಯವಾಗಿತ್ತು. ಆದರೆ ರೇಶ್ಮೆ ಎಂದಿಗೂ ರೇಶ್ಮೆಯೇ. ನಮ್ಮ ನೇಕಾರರು ಸೋಲೊಪ್ಪಿಕೊಳ್ಳಲಿಲ್ಲ. ಕೇಂದ್ರ ಸರಕಾರವೂ ಅವರ ಸಹಾಯಕ್ಕೆ ನಿಂತಿತು. ಚೈನಾ ಸಿಲ್ಕಿನ ಪ್ರಭಾವವನ್ನು ಮೆಟ್ಟಿ ನಿಲ್ಲಲು ರೇಶ್ಮೆ ನೇಕಾರರು ಪಣತೊಟ್ಟರು. ಆಧುನಿಕ ಯುಗಕ್ಕೆ ತಕ್ಕಂತೆ ರೇಶ್ಮೆ ಸೀರೆಗಳ ಚಿತ್ತಾರದಲ್ಲಿ, ನೇಯ್ಗೆಯಲ್ಲಿ ಬದಲಾವಣೆಗಳಾದುವು. ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಇಂದಿಗೂ ನಮ್ಮ ರೇಶ್ಮೆ ಸೀರೆಗಳಿಗೇ ಅಗ್ರ ಸ್ಥಾನ. ಕಾರ್ಯಕ್ರಮಗಳಿಗೆ ಹೋಗಿ ಬಂದ ತಕ್ಷಣ ರೇಶ್ಮೆ ಸೀರೆಯನ್ನು ಬದಲಾಯಿಸಿಬಿಡಿ. ಈ ಸೀರೆಗಳನ್ನು ನೀರಿನಲ್ಲಿ ಮುಳುಗಿಸಿ ಒಗೆಯದಿರುವುದೇ ಜಾಣತನ. ಮೇಜೊಂದನ್ನು ಸ್ವಚ್ಛಗೊಳಿಸಿ ಅದರ ಮೇಲೆ ಸೀರೆಯನ್ನು ಹರಡಿ. ಸ್ವಚ್ಛವಾದ ಟವೆಲೊಂದನ್ನು ಚೆನ್ನಾಗಿ ಒದ್ದೆಮಾಡಿ(ಈ ಟವೆಲು ಬಣ್ಣ ಬಿಡುವಂತಿರಬಾರದು) ಹಿಂಡಿ ಸೀರೆಯನ್ನು ಮೃದುವಾಗಿ ಉಜ್ಜಿ ಹಿಡಿದಿರಬಹುದಾದ ಬೆವರು, ಕೊಳೆಗಳನ್ನು ತೆಗೆಯಿರಿ. ನೇರವಾಗಿ ಬಿಸಿಲು ಬೀಳದ ಸ್ಥಳದಲ್ಲಿ ಗಾಳಿಗೆ ಹಾಕಿ ಒಣಗಿಸಿ. (ಸೀರೆಯನ್ನು ಉಡದಿದ್ದರೂ ವರ್ಷದಲ್ಲಿ ಒಂದೆರಡು ಸಲವಾದರೂ ಅವನ್ನು ಇಳಿಬಿಸಿಲಿಗೆ ಹಾಕಿ ಒಳಗಿಡುವ ಅಭ್ಯಾಸ ಒಳ್ಳೇದು) ಇಸ್ತ್ರಿ ಹಾಕುವಾಗ ಸೀರೆಯ ಮೇಲ್ಬಾಗಕ್ಕೆ ನೇರವಾಗಿ ಎಂದಿಗೂ ಬಿಸಿ ಇಸ್ತ್ರಿಪೆಟ್ಟಿಗೆಯನ್ನು ಇಡಬೇಡಿ. ಸೀರೆಯನ್ನು ಕವುಚಿ ಹರಡಿ. ತೆಳ್ಳಗಿನ ಪೇಪರನ್ನು ಅದರ ಮೇಲಿಟ್ಟು(ದಿನಪತ್ರಿಕೆಯ ಹಾಳೆ)ನಂತರ ಇಸ್ತ್ರಿ ಹಾಕಿ. ಇಸ್ತ್ರಿ ಹಾಕಿದ ತಕ್ಷಣ ಸೀರೆಯನ್ನು ಮಡಚಿ ಕಪಾಟಿನಲ್ಲಿಡಬೇಡಿ. ಪದರಗಳೊಳಗಿನ ಬಿಸಿ ತಣಿಯುವ ಪ್ರಕ್ರಿಯೆಯಲ್ಲಿ ಆವಿಯ ಅಂಶ ಉಳಿಕೆಯಾದಾಗ ಬೂಸುರು ಹುಟ್ಟಿಕೊಳ್ಳುತ್ತದೆ. ಒಂದೆರಡು ಘಂಟೆಗಳ ಕಾಲ ಗಾಳಿಯಾಡುವಲ್ಲಿಟ್ಟು ನಂತರ ಕಪಾಟಿನಲ್ಲಿಡಿ. ರೇಶ್ಮೆ ಸೀರೆಯನ್ನು ಕಬ್ಬಿಣದ ಕಪಾಟಿನೊಳಗೆ ಇಡಬೇಡಿ. ಎಂತಹ ಉತ್ತಮ ರೀತಿಯ ಉಕ್ಕಿನ ಕಾಪಾಟೇ ಆಗಿರಲಿ ರೇಶ್ಮೆ ಬಟ್ಟೆಗೆ ಯೋಗ್ಯವಲ್ಲ. ಮಳೆಗಾಲದ ತಂಪು ಹವೆಯಿಂದಾಗಿ ಒಂದು ರೀತಿಯ ವಾಸನೆ ಅದರೊಳಗೆ ಸುಳಿದಾಡುತ್ತಿರುತ್ತದೆ ಮತ್ತು ಇದರಿಂದಾಗಿ ಬಟ್ಟೆ ನುಸಿಗಳು ರೇಶ್ಮೆ ಬಟ್ಟೆಗಳೆಡೆಗೆ ಆಕರ್ಷಿತವಾಗುತ್ತವೆ. ತೇವಾಂಶದಿಂದಾಗಿ ಬೂಸುರು ಹಿಡಿದ ರೇಶ್ಮೆ ಬಟ್ಟೆ ನುಸಿಗೆ ಆಹಾರವಾಗುತ್ತದೆ. ಕೆಲವೊಮ್ಮೆ ಉಕ್ಕಿನ ಕಲೆಗಳೂ ಹಿಡಿಯುವ ಸಾಧ್ಯತೆಗಳಿವೆ. ರೇಶ್ಮೆ ಸೀರೆಗಳನ್ನು ಪಾಲಿಥಿನ್ ಬ್ಯಾಗುಗಳಲ್ಲಿ ಹಾಕಿ ಇಡಬೇಡಿ. ತೇವಾಂಶ ಹೀರುವ ಇವುಗಳಿಂದಾಗಿ ಕೆಲವು ಸಮಯದ ನಂತರ ಬಟ್ಟೆಯ ಮೇಲ್ಮೈಯ್ಯಲ್ಲಿ ಅಲ್ಲಲ್ಲಿ ಹಳದಿ ಬಣ್ಣದ ಕಲೆಗಳುಂಟಾಗುತ್ತವೆ.

Join more than 1 million learners

On Spark.Live, you can learn from Top Trainers right from the comfort of your home, on Live Video. Discover Live Interactive Learning, now.