ಕಲ್ಲಂಗಡಿ ಹಣ್ಣು ಎಲ್ಲರಿಗೂ ಇಷ್ಟವಾಗುವ ಹಣ್ಣು.. ಈ ಹಣ್ಣು ಬಾಯಾರಿಕೆ ನಿವಾರಿಸುವುದು ಮಾತ್ರವಲ್ಲ. ಅನೇಕ ಆರೋಗ್ಯಕಾರಿ ಗುಣಗಳನ್ನು ಒಳಗೊಂಡಿದೆ. ಕಲ್ಲಂಗಡಿ ಹಣ್ಣು ಶೇ. 92 ರಷ್ಟು ನೀರಿನ ಅಂಶ ಹೊಂದಿದ್ದು, ಪೋಟ್ಯಾಶಿಯಂ , ಆಂಟಿ ಆಕ್ಯಿಡೆಂಟ್ ಕೂಡಾ ಹೇರಳವಾಗಿ ಇದರಲ್ಲಿ ದೊರೆಯುತ್ತದೆ. ಕಲ್ಲಂಗಡಿ ಹಣ್ಣು ಹೃದಯದ ಆರೋಗ್ಯಕ್ಕೂ ಹೆಚ್ಚು ಉಪಯುಕ್ತ. ಅಲ್ಲದೇ ನಿರ್ಜಿಲೀಕರಣದ ಸಮಸ್ಯೆ ಇರುವವರು ಕಲ್ಲಂಗಡಿ ಹಣ್ಣು ಸೇವಿಸುವುದು ಉತ್ತಮ.
ನಿರ್ಜಲೀಕರಣಕ್ಕೊಳಗಾದವರಿಗೆ ಕಲ್ಲಂಗಡಿ ಸೇವನೆ ಉತ್ತಮ. ಇದರಲ್ಲಿ ನಾರಿನಂಶ ಅಧಿಕವಿದ್ದು, ಜೀರ್ಣಕ್ರಿಯೆಗೂ ಒಳ್ಳೆಯದು. ಇದಲ್ಲದೆ ವಿಟಮಿನ್ ಎ ಅಂಶ ಹೆಚ್ಚಿರುವುದರಿಂದ ಕೂದಲು, ಚರ್ಮದ ರಕ್ಷಣೆಗೆ ಹೇಳಿ ಮಾಡಿಸಿದಂತಹದ್ದು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿರುವುದರಿಂದ ಕ್ಯಾನ್ಸರ್ ರೋಗ ನಿವಾರಕವೂ ಆಗಿದೆ.

ಕಲ್ಲಂಗಡಿ ಹಣ್ಣಿನಲ್ಲಿ ಅನೇಕ ಪೋಷಕಾಂಶಗಳು ಇರುವುದರಿಂದ ಈ ಹಣ್ಣು ತಿನ್ನಲು ರುಚಿಕರವಾಗಿರುತ್ತದೆ. ಈ ಹಣ್ಣಿನಲ್ಲಿ ಲೈಕೋಪೀನ್ ಅಂಶ ಹೆಚ್ಚಾಗಿರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಶೇ ೬ ರಷ್ಟು ಸಕ್ಕರೆ ಅಂಶ ಹೊಂದಿದ್ದರು ಕೂಡಾ ಮಧುಮೇಹಿಗಳು ಇದನ್ನು ಸೇವಿಸಬಹುದು. ಮಲಬದ್ಧತೆ ತೊಂದ್ರೆ ಇದ್ದರೆ ಇದನ್ನು ಸೇವಿಸಿ. ಇದರಲ್ಲಿನ ಕೋಲಿನ್ ಎಂಬ ಅಂಶ ಉರಿಯೂತವನ್ನು ತಡೆಗಟ್ಟುತ್ತದೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದರೆ ಇದು ಅತ್ಯುತ್ತಮ. ಹೊಟ್ಟೆ ತುಂಬಿದ ಅನುಭವದ ಜತೆಗೆ ಅನೇಕ ಉತ್ತಮ ಪೌಷ್ಟಿಕಾಂಶವನ್ನು ಈ ಹಣ್ಣು ನೀಡುತ್ತದೆ.
ಕಲ್ಲಂಗಡಿ ಹಣ್ಣು ತಿನ್ನುವಾಗ ಗಮನ ಹರಿಸಿ!
ಇತ್ತೀಚಿನ ದಿನಗಳಲ್ಲಿ ಇದು ಹಾಳಾಗದಂತೆ ರಕ್ಷಿಸಲು ರಾಸಾಯನಿಕಗಳನ್ನು ಇಂಜೆಕ್ಟ್ ಮಾಡಿ ಮಾರಾಟಕ್ಕಿಡುತ್ತಾರೆ. ಅದರಲ್ಲೂ ದೊಡ್ಡ ಬಿಳಿ ಬಣ್ಣದ ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ಪ್ರಮಾಣದಲ್ಲಿ ರಾಸಾಯನಿಕ ಸಿಂಪಡನೆ ಮಾಡುತ್ತಾರೆ ಎನ್ನಲಾಗುತ್ತದೆ. ಅದರ ಹೊರತಾಗಿ ಕಲ್ಲಂಗಡಿ ಹಣ್ಣು ರುಚಿಗೂ ಆರೋಗ್ಯಕ್ಕೂ ಉತ್ತಮ
ಕಲ್ಲಂಗಡಿ ಹಣ್ಣು ತಿನ್ನುವಾಗ ಈ ಬಗ್ಗೆ ಗಮನ ಹರಿಸುವುದು ಉತ್ತಮ. ಹಳದಿ ಬಣ್ಣದ ಸಿಪ್ಪೆಯನ್ನು ಹೊಂದಿರುವ ಕಲ್ಲಂಗಡಿ ಹಣ್ಣಿನ ಮೇಲೆ ಗೆರೆ ಗೆರೆ ಇದ್ದರೆ ತಿನ್ನಬೇಡಿ.
ಕಲ್ಲಂಗಡಿ ಹಣ್ಣು ಬೇಗ ಹಣ್ಣಾಗಲು ಹಾರ್ಮೋನ್ ಇಂಜೆಕ್ಷನ್ ಬಳಸುತ್ತಾರೆ. ಆದ್ದರಿಂದ ಕೊಳ್ಳುವಾಗ ಅದರಲ್ಲಿ ರಂಧ್ರವಿದೆಯೇ ಗಮನಿಸಿ.
ಕಲ್ಲಂಗಡಿಯನ್ನು ಎತ್ತಿದಾಗ ಅದು ಭಾರ ಅನಿಸದೇ ಇದ್ದರೆ. ಅದು ಸರಿಯಾಗಿ ಬಲಿತ್ತಿಲ್ಲ ಎಂದು ಅರ್ಥ. ಚೆನ್ನಾಗಿ ಹಣ್ಣಾದ ಕಲ್ಲಂಗಡಿ ಹಣ್ಣು ಮೇಲ್ಮೈ ಹೊಳಪಿನಿಂದ ಕೂಡಿರುತ್ತದೆ ಎಂದು ತಿಳಿದುಕೊಳ್ಳಿ.

ಸೌಂದರ್ಯಕ್ಕಾಗಿ ಕಲ್ಲಂಗಡಿ ಹಣ್ಣು..
ಸೌಂದರ್ಯಕ್ಕೆ. ಮುಖದ ಕಾಂತಿ ಹೆಚ್ಚಿಸಿಕೊಳ್ಳಲು, ಮುಖವನ್ನು ಅಂದಗಾಣಿಸಲು, ಮೊಡವೆಗಳಾಗದಿರಲು ಬಹಳ ಆರೈಕೆ ಮುಖ್ಯ. ಇದಕ್ಕೆ ಯಾವುದೋ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಕಲ್ಲಂಗಡಿ ಹಣ್ಣನ್ನು ಬಳಸಿ ಮುಖದ ಅಂದವನ್ನು ಹೆಚ್ಚಿಸಿಕೊಳ್ಳಬಹುದು.
ಬಿರು ಬಿಸಿಲಿನಿಂದ ಮುಖ ಕಪ್ಪಾಗಿದ್ದರೆ ಕಲ್ಲಂಗಡಿ ಹಣ್ಣಿನ ರಸವನ್ನು ಚರ್ಮಕ್ಕೆ ಲೇಪನ ಮಾಡಿದರೆ ಮುಖದ ಕಾಂತಿ ಹೆಚ್ಚಾಗುತ್ತದೆ. ಹಾಗೂ ಮುಖದಲ್ಲಿ ಮೊಡವೆಗಳಾಗಿದ್ದರೆ ಕಲ್ಲಂಗಡಿ ಹಣ್ಣಿನ ಬೀಜವನ್ನು ಪುಡಿ ಮಾಡಿ ಆ ಪುಡಿಗೆ ಬಿಸಿ ನೀರನ್ನು ಬೆರೆಸಿ ಮೊಡವೆಗಳ ಮೇಲೆ 5 ರಿಂದ 10 ನಿಮಿಷಗಳ ಕಾಲ ಮಾಲಿಷ್ ಮಾಡಿದರೆ ಮೊಡವೆಗಳು ನಿವಾರಣೆಯಾಗುತ್ತದೆ.
ಸಮ ಪ್ರಮಾಣದಲ್ಲಿ ಕಲ್ಲಂಗಡಿ ರಸ ಮತ್ತು ಜೇನುತುಪ್ಪವನ್ನು ಬೆರೆಸಿ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳುವುದರಿಂದ ಬಣ್ಣ ಕಳೆದುಕೊಂಡಿರುವ ಅಥವಾ ಹಾನಿಗೆ ಒಳಗಾದ ಚರ್ಮಕ್ಕೆ ಒಳ್ಳೆಯದು. ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸಿದರೆ ದೇಹದ ಮಾಂಸಖಂಡಗಳಲ್ಲಿ ಬಿಗಿಯುಂಟಾಗಿ ನೋವಾಗಿದ್ದರೆ ಅದು ಗುಣವಾಗುತ್ತದೆ.

ಮೊಸರಿನ ಮಿಶ್ರಣ ಹಾಗೂ ಕಲ್ಲಂಗಡಿಯನ್ನು ಮುಖಕ್ಕೆ ಬಳಸಿದರೆ ಯೌವನಯುತವಾದ ಮತ್ತು ಆರೋಗ್ಯಕಾರಿ ಚರ್ಮ ಅಷ್ಟೇ ಅಲ್ಲದೇ ಮುಖದ ಚರ್ಮವು ನಯವಾಗುವುದು. ಕಲ್ಲಂಗಡಿ ಬೀಜವನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿಕೊಂಡು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯಲ್ಲಾದ ಹುಳಗಳು ಸಾಯುತ್ತವೆ. ಹಾಗೂ ಮೊಡವೆಗಳು ಕಡಿಮೆಯಾಗುತ್ತದೆ.
ಕಲ್ಲಂಗಡಿ ರಸಕ್ಕೆ ಸಕ್ಕರೆ ಬೆರೆಸಿ ಸೇವಿಸುವುದರಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.ಬಿಸಿಲಿನಿಂದ ಆಗಿರುವ ಸುಟ್ಟ ಕಲೆಗಳಿಗೆ ಕಲ್ಲಂಗಡಿಯಲ್ಲಿರುವ ಕೆಂಪು ಅಂಶಗಳು ನೈಸರ್ಗಿಕವಾಗಿ ಬಿಸಿಲಿನಿಂದ ರಕ್ಷಣೆಯನ್ನು ನೀಡುತ್ತದೆ. ಕಲ್ಲಂಗಡಿ ಮತ್ತು ಸೌತೆಕಾಯಿ ಮಿಶ್ರಣವು ಬಿಸಿಲಿನಿಂದ ಆಗಿರುವ ಸುಟ್ಟ ಕಲೆಗಳನ್ನು ನಿವಾರಿಸುತ್ತದೆ. ಮತ್ತು ಸೌತೆಕಾಯಿಯು ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ.
3 ಸಣ್ಣ ಸಣ್ಣ ಕಲ್ಲಂಗಡಿ ಹಣ್ಣಿನ ತುಂಡುಗಳಿಗೆ ಅರ್ಧ ಬಾಳೆಹಣ್ಣು ಹಾಕಿ ಮಿಶ್ರಣ ಮಾಡಿ ಈ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳುವುದರಿಂದ ಮೊಡವೆಗಳು ನಿವಾರಣೆಯಾಗುವುದಲ್ಲದೇ ಮೊಡವೆಗಳಿಂದಾಗುವ ಉರಿಯು ಕಡಿಮೆ ಆಗುತ್ತದೆ. ಅಲ್ಲದೇ ಕಲ್ಲಂಗಡಿ ಹಣ್ಣಿನ ಬಿಳಿ ಭಾಗವನ್ನು ತೆಗೆದು ಹಣೆಗೆ ಹಚ್ಚಿದರೆ ತಲೆನೋವು ಕಡಿಮೆಯಾಗುತ್ತದೆ.
ಅದಕ್ಕೂ ಮೊದಲು ವೈದ್ಯರ ಸಲಹೆಗಳನ್ನು ತೆಗೆದುಕೊಂಡು ಅವರು ಸೂಚನೆಗಳನ್ನು ಪಾಲಿಸುವುದು ಉತ್ತಮ. ಏಕೆಂದರೆ ನೈಸರ್ಗಿಕವಾಗಿದ್ದರೂ ಕೆಲವೊಂದು ಪದಾರ್ಥಗಳು ಅಲರ್ಜಿಯನ್ನು ಉಂಟು ಮಾಡಬಹುದು.